ಕಾಲಯಶಸ್

ಬೌದ್ಧಧರ್ಮಪ್ರಚಾರಕ್ಕಾಗಿ 5 ನೆಯ ಶತಮಾನದಲ್ಲಿ ಭಾರತದಿಂದ ಚೀನಕ್ಕೆ ಹೋದ ಬೌದ್ಧ ಭಿಕ್ಷು. ಅವನ ಹೆಸರನ್ನು ಚೀನೀಗೆ ಲಿಪ್ಯಂತರಗೊಳಿಸಿದರೆ ಅದು ಕಿಯಾಂಗ್-ಲಿಯಾಂಗ್-ಯೇ-ಷೇ ಎಂದಾಗುತ್ತದೆ. ಚೀನಿ ಭಾಷೆಯಲ್ಲಿ ಅವನ ಹೆಸರು ಷೇ-ಚೆಂಗ್. ಆತ ಭೌದ್ಧ ಧರ್ಮವನ್ನಾಶ್ರಯಿಸಿ ಅದರ ಪ್ರಚಾರಕ್ಕೆ ತನ್ನ ಜೀವಿತಕಾಲವನ್ನು ಮುಡಿಪಾಗಿಟ್ಟಿದ್ದ. ಅಭಿಧರ್ಮ, ವಿನಯ ಮತ್ತು ತ್ರಿಪಿಟಕಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದು ಅಭಿಧರ್ಮ ವಿಷಯದಲ್ಲಿ ಪೂರ್ಣ ಪಾಂಡಿತ್ಯ ಹೊಂದಿದ್ದ. ಬಹಳ ಕಷ್ಟಸಾಧ್ಯವಾದ ಮರಳ್ಗಾಡುಗಳ ಮಾರ್ಗವಾಗಿ ಪ್ರಯಾಣ ಮಾಡಿ 424 ರ ಸುಮಾರಿದಲ್ಲಿ ಯುವಾಷ್-ಕಿಯಾರವನ್ನು ತಲಪಿ ವೆನ್ ಚಕ್ರವರ್ತಿಯ ಅಪ್ಪಣೆಯ ಮೇರೆಗೆ ನಿರ್ಮಿತವಾದ ಹೊನಾನ್ ವಿಹಾರದಲ್ಲಿ ನೆಲಸಿದ. ತನ್ನ ಧರ್ಮಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ಶೇಖರಣೆ ಮತ್ತು ಬೌದ್ಧ ಧರ್ಮ ಪ್ರಚಾರಗಳಿಗಾಗಿ ದೇಶ ಪರ್ಯಟನ ಕಾರ್ಯದಲ್ಲಿ ನಿರತನಾದ. ಆತ ಚೀನೀ ಭಾಷೆಗೆ ಅನುವಾದಿಸಿದ ಭೈಷಜ್ಯಸೂತ್ರ ಮತ್ತು ಅಮಿತಾಯುಧ್ರ್ಯಾನ ಸೂತ್ರವೆಂಬ ಎರಡು ಗ್ರಂಥಗಳು ದೊರಕಿವೆ. ತನ್ನ 60 ನೆಯ ವಯಸ್ಸಿನಲ್ಲಿ (444) ಆತ ಮರಣಹೊಂದಿದ.          

 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ